ಜಾನಕಮ್ಮ, ಬೆಳೆಗೆರೆ -
	ಬೆಳೆಗೆರೆ ಜಾನಕಮ್ಮನವರು 1912ರಲ್ಲಿ ಚಳ್ಳಕೆರೆ ತಾಲ್ಲೂಕಿನ ಬೆಳೆಗೆರೆಯಲ್ಲಿ ಜನಿಸಿದರು. ಇವರ ತಂದೆ ಚಂದ್ರಶೇಖರ ಶಾಸ್ತ್ರಿಗಳು ಹಾಗೂ ತಾಯಿ ಅನ್ನಪೂರ್ಣಮ್ಮ. ಇವರ ಕುಟುಂಬದಲ್ಲಿಯೇ ಒಂದು ಸಾಹಿತ್ಯ ಪ್ರೇಮ, ಪ್ರಗತಿಪರತೆ, ಕಾವ್ಯಾಸಕ್ತಿ ಹಾಗೂ ಕವಿತ್ವ ಹರಿದು ಬಂದಿರುವಂತಹುದು. ಚಂದ್ರಶೇಖರಶಾಸ್ತ್ರಿಗಳು ಇಡೀ ಚಳ್ಳಕೆರೆ ತಾಲ್ಲೂಕಿನಲ್ಲಿ ಲಾವಣಿಶಾಸ್ತ್ರಿ, ಕಡಲೇಕಾಯಿಶಾಸ್ತ್ರಿ ಎಂದೇ ಪ್ರಖ್ಯಾತರಾಗಿದ್ದ ಆಶುಕವಿಗಳು.

	ಬೆಳೆಗೆರೆ ಜಾನಕಮ್ಮನವರು ಚಂದ್ರಶೇಖರಶಾಸ್ತ್ರಿಗಳ ಐವರು ಮಕ್ಕಳಲ್ಲಿ ಎರಡನೆಯವರು. ಇವರ ಅಣ್ಣ ಸೀತಾರಾಮಶಾಸ್ತ್ರಿಗಳು `ಕಾಶಿಯಾತ್ರೆಯಂತಹ ನಾಟಕಗಳನ್ನು ಬರೆದ, ಗಣಿತಶಾಸ್ತ್ರವಲಯದಲ್ಲಿ `ಕ್ಯಾಲ್ಕುಲೆಸ್ ಶಾಸ್ತ್ರಿ ಎಂದೇ ಸುಪ್ರಸಿದ್ಧರಾದವರು. ಜಾನಕಮ್ಮನವರ ತಂಗಿಯರು ರುಕ್ಕಮ್ಮ ಮತ್ತು ಪಾರ್ವತಮ್ಮ. ಬೆಳೆಗೆರೆ ಪಾರ್ವತಮ್ಮನವರೂ ಸೃಜನಶೀಲ ಲೇಖಕಿಯೆ. ಮತ್ತೊಬ್ಬ ತಮ್ಮ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಶಿಕ್ಷಣ ತಜ್ಞರು, ಗಾಂಧೀವಾದಿಗಳು ಹಾಗೂ `ಯೇಗ್ದಾಗೆಲ್ಲಾ ಐತೆ, `ಮರೆಯಲಾದೀತೇ?'-ಮುಂತಾದ ವಿಶಿಷ್ಟ ಕೃತಿಗಳನ್ನು ಕನ್ನಡಕ್ಕೆ ನೀಡಿದವರು.

	ಬೆಳೆಗೆರೆ ಜಾನಕಮ್ಮನವರಿಗೆ ತಮ್ಮ ಹತ್ತನೇ ವಯಸ್ಸಿನಲ್ಲೇ ಸೋದರತ್ತೆಯ ಮಗ ಮಲ್ಲೂರು ಕೃಷ್ಣಶಾಸ್ತ್ರಿಗಳೊಂದಿಗೆ ವಿವಾಹವಾಯಿತು. ಅವರು ಬಳ್ಳಾರಿಯ `ವಾಲ್‍ಕಾಟ್ ಬ್ರದರ್ಸ್ ಸ್ವಿಸ್ ಕಂಪನಿಯ ಸಣ್ಣ ಸಂಬಳದ ಗುಮಾಸ್ತರಾಗಿದ್ದರು. ಕಮಲನಾಭ ಹಾಗೂ ಪ್ರಸನ್ನಕುಮಾರ ಅವರು, ಜಾನಕಮ್ಮ ದಂಪತಿಗಳ ಇಬ್ಬರು ಮಕ್ಕಳು.

	ಜಾನಕಮ್ಮನವರು ತಮ್ಮ ಕವನಸಂಕಲನ `ಕಲ್ಯಾಣ'ವನ್ನು ಅವರಿಗೆ ಸಮರ್ಪಿಸಿದ್ದಾರೆ. ಬೇಂದ್ರೆ, ಬಿ.ಎಂ.ಶ್ರೀ ಅವರು ಇವರಿಗೆ ಆತ್ಮೀಯರು. ಜಾನಕಮ್ಮನವರ ಬದುಕಿನಲ್ಲಿ ಪ್ರೇರಣೆ ನೀಡಿದ ಮತ್ತೊಬ್ಬ ಹಿರಿಯರು ಪ್ರಣವಾನಂದ ಸ್ವಾಮೀಜಿಯವರು.

	ಜಾನಕಮ್ಮನವರ ಪತಿ ತೀರಿಕೊಂಡಾಗ ಬೇಂದ್ರೆಯವರು ತಮ್ಮ ಶೋಕವನ್ನು ಗೀತೆಯ ಮೂಲಕ ಹರಿಸಿದರು.

			`ತಂಗಿ ಜಾನಕಿ ನಿನ್ನ
			ವೈದೇಹದೊಲವಿನಲಿ
			ಓಲೆ ಬಂದಿತು ಒಂದು
			ಇತ್ತ ತೇಲಿ- ಎಂಬುದು ಬೇಂದ್ರೆಯವರು ತಮ್ಮ ಆತ್ಮೀಯರ ನೋವು-ನಲಿವುಗಳಿಗೆ 

ಸ್ಪಂದಿಸಿ ಬರೆದ ಕವನಗಳಲ್ಲಿ ಮುಖ್ಯವಾದುದು. ನವೋದಯ ಪೂರ್ವದಲ್ಲಿ ಮಹಿಳೆಯರು ಅಕ್ಷರವಂತರಾಗುವುದೇ ಕಷ್ಟ ಎನ್ನುವಾಗ ಜಾನಕಮ್ಮನವರು ತುಂಬ ಪ್ರಾಮಾಣಿಕವಾಗಿ ತಮ್ಮ ನೋವು ನಲಿವುಗಳನ್ನು ತೋಡಿಕೊಂಡರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು.	ಹೆಣ್ಣಿನ ಅಸಹಾಯಕತೆ, ಸಮಾಜದಲ್ಲಿ ಅವಳಿಗಿರುವ ಅನಾದರಗಳನ್ನು ಕಂಡು ಅವರು ಸಾಕಷ್ಟು ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. `ಹೆಣ್ಣಾಟ' ಎಂಬ ಕವನದಲ್ಲಿ,

			ಹೆಣ್ಣು ಗಂಡೆಂಬ ಗೊಂಬೆಗಳ ಆಟದಲಿ
			ಎನ್ನೊಡಲು ಕುದಿಯುತಿದೆ ಹೆಣ್ಣಾಟ ಕಂಡು
			ಮನಸ್ಸಿದ್ದು ಜನಕಜೆಗೆ ಏನೂ ಚೆನ್ನಿಲ್ಲ.

ಲೈಂಗಿಕ ತಾರತಮ್ಯದ ಬಗ್ಗೆ ಅಸಮಾಧಾನವನ್ನು ತೋಡಿಕೊಳ್ಳುತ್ತಾರೆ `ಚಂಡಶಾಸನ ಎಂಬ ಮತ್ತೊಂದು ಪದ್ಯದಲ್ಲಿ,

			ಲಂಚಕೋರನು ನೀನು ವಂಚನೆಯ ಮಾಡಿರುವೆ
			ಮೃದುತನ ಸ್ತ್ರೀವರ್ಗಕ್ಕೆ
			ಕಸಕ್ಕಿಂತ ಕಡೆಯಾಯಿತೆ ಹೆಣ್ಣು ಜನ್ಮವು ನಿನಗೆ
			ಈ ಭಾರ ಹೊರಿಸುವುದಕೆ ಗಿಡವೆಂದು ಬಗೆದೆಯಾ
			ಹೆಣ್ಣು ಜನ್ಮದ ಒಡಲ ಫಲಗಳನು ಸೃಜಿಸುವುದಕೆ 

ಎಂದು ಪ್ರಶ್ನಿಸುತ್ತಾರೆ. ಈ ಮಾತುಗಳಲ್ಲಿ ದಟ್ಟವಾದ ಸ್ತ್ರೀಸಂವೇದನೆಯನ್ನು ಗುರುತಿಸುತ್ತೇವೆ. ಜಾನಕಮ್ಮನವರು ತಮ್ಮ ಸುತ್ತಮುತ್ತಲಿನ ಬದುಕಿನ ದೈನಂದಿನ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುತ್ತಾರೆ. ಬಳ್ಳಾರಿಯಂತಹ ಬಿಸಿಲು ಪ್ರದೇಶದ ನೀರಿನ ಸಮಸ್ಯೆ, ಬೇಗೆಯ ಬದುಕಿಗೆ ತಂಪಿನ ಕರೆ ನೀಡುತ್ತಾರೆ.

			ಬಾಯಾರಿ ಬಾ ಬಂದೆ
			ಬತ್ತಿದೆ ಈ ಕೊಳವು ಬಾರವ್ವ ಗಂಗೆ
			ಉರಗನು ನಿನ್ನ ಬಿಡೆನೆ ಶಂಕರ ತಡೆದಿಹನೆ ಪೇಳವ್ವೆ ಗಂಗೆ. . . 

ಎನ್ನುವಾಗ ಜನತೆಯ ಬದುಕನ್ನು, ಅದರಲ್ಲೂ ಹೆಣ್ಣನ್ನು ಕಾಡುವ ನೀರಿನ ಸಮಸ್ಯೆಯನ್ನು ಕುರಿತು ದುಃಖಿಸುತ್ತ, ಗಂಗೆ ತಮ್ಮ ನಾಡಿನಲ್ಲಿ ಯಥೇಚ್ಛವಾಗಿ ಹರಿಯಲಿ, ಜನತೆಯ ಕಂಗೆಟ್ಟ ಬದುಕನ್ನು ತೇವವಾಗಿಸಲಿ, ಸಮೃದ್ಧವಾಗಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

	ಹೆಣ್ಣಿನ ಬಂಧನದ ಬಗ್ಗೆ, ದೇಶಕ್ಕೆ ಒದಗಿದ ಬಂಧನದ ಬಗ್ಗೆ ಅವರ ಮನಸ್ಸು ಕುದಿಯುತ್ತದೆ.

			ಕುದಿಯುವುದು ಒಳಗೊಳಗೆ
			ಸ್ವಾತಂತ್ರ್ಯವಿಲ್ಲೆನುತ
			ದುಡಿಯುವುದು ಹಗಲಿರುಳು 
			ಉಸಿರಿರುವ ತನಕ

ಎಂದು ಜಾನಕಮ್ಮನವರು ಹೆಣ್ಣಿನ ಸ್ವಾತಂತ್ರ್ಯರಹಿತ, ಅತಂತ್ರ ಬದುಕಿನ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಾರೆ.

	ಜಾನಕಮ್ಮನವರು ದೇಶದ ಅತಂತ್ರಸ್ಥಿತಿಯ ಬಗೆಗೆ, ಬಡತನದ ಬಗ್ಗೆ, ಸಾಮಾಜಿಕ ಅನ್ಯಾಯಗಳ ಬಗೆಗೂ ಮಾತನಾಡುವುದು ಬಹಳ ಮುಖ್ಯವಾದುದು. ಬೆಳೆಗೆರೆ ಜಾನಕಮ್ಮನವರು ಜನಕಜೆ ಕಾವ್ಯನಾಮದಿಂದ, `ಸುಕವಯಿತ್ರಿ ಎಂಬ ಬಿರುದಿನ ಮೂಲಕ ಮಹಿಳೆಯರು ಮಾತನಾಡಲು, ಅಭಿವ್ಯಕ್ತಿಸಲು ಹಿಂಜರಿಯುತ್ತ, ಅವಕಾಶಗಳಿಗಾಗಿ ಕಾಯುತ್ತಿದ್ದಾಗ ತಮ್ಮ ಸೀಮಿತ ಬದುಕಿನ ವಲಯದೊಳಗೇ, ದಟ್ಟ ಜೀವನಾನುಭವದಿಂದ ತುಂಬು ಸಂಪನ್ನರಾಗಿ, ಕನ್ನಡದ ಆರಂಭಿಕ ಮಹಿಳಾ ಕಾವ್ಯದ ಪ್ರಮುಖ ಪ್ರತಿನಿಧಿಯಾಗಿದ್ದಾರೆ.

	ಅವರು ಜೀವಿಸಿದ್ದ ಕಾಲದಲ್ಲಿ ಅವರ ಕಾವ್ಯ ಪ್ರಕಟಣೆಯಾಗದಿದ್ದರೂ ಅವರ ಮರಣಾನಂತರ ಚಿತ್ರದುರ್ಗದ ಮರುಘಾಮಠದ ನೆರವಿನಿಂದ `ಕಲ್ಯಾಣ' ಕೃತಿ ಬೇಂದ್ರೆಯವರ ಮುನ್ನುಡಿ ಹೊತ್ತು ಪ್ರಕಟವಾಗಿದೆ. ಬೆಳೆಗೆರೆ ಜಾನಕಮ್ಮನವರು ನಿರ್ವಿವಾದವಾಗಿ ನವೋದಯ ಪೂರ್ವ ಮಹಿಳಾ ಕಾವ್ಯದ ಪ್ರಮುಖ ಧ್ವನಿಯಾಗಿದ್ದಾರೆ.					 *
ಪರಿಷ್ಕರಣೆ:
ಡಾ|| ಮಂಗಳಾ ಪ್ರಿಯದರ್ಶಿನಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ